ಶ್ರೀ ರಾಮಕೃಷ್ಣ ಪರಮಹಂಸ- ಭ್ರಮೆಗಳ ತೂಗುಯ್ಯಾಲೆ

ಶ್ರೀ ರಾಮಕೃಷ್ಣ ಪರಮಹಂಸ- ಭ್ರಮೆಗಳ ತೂಗುಯ್ಯಾಲೆ

About this Book

 ಭಾರತದ ಅಧ್ಯಾತ್ಮದ ಮೇರು ಶಿಖರ , ನಿರ್ವಿಕಲ್ಪ ಸಮಾಧಿ ತಲುಪಿ ಬ್ರಹ್ಮನಲ್ಲಿ ಲೀನಗೊಳ್ಳಬಲ್ಲ ಅಸಾಧಾರಣ ಸಾಧಕ , ಎಲ್ಲ ಧರ್ಮಗಳು ಒಂದೇ ನಿಲಯಕ್ಕೆ ಹೋಗುತ್ತವೆ ಎನ್ನುವುದನ್ನು ತೋರಿಸಿ, ಬೋಧಿಸಿದ ಯುಗಾಚಾರ್ಯ , ಗುರುಗಳ ಗುರು ,ಕಾಮ-ಕಾಂಚನಗಳನ್ನು ಗೆದ್ದ ವಿರಕ್ತ ಜೀವ ಪ್ರೇಮಿ , ಮನುಕುಲದ ಕಲ್ಯಾಣ ಬಯಸುವ ತ್ಯಾಗಿ ಹೀಗೆ ನಾನಾ ಉತ್ಪ್ರೇಕ್ಷಿತ ಗುಣಗಳಿಂದ ಭಕ್ತ, ಅನುಯಾಯಿ , ಅಭಿಮಾನಿಗಳಿಂದ ಹೊಗಳಲ್ಪಟ್ಟಿರುವ ರಾಮಕೃಷ್ಣರು ನಿಜವಾಗಿಯೂ ಹೇಗಿದ್ದರು ? ನಿಜವಾದ ರಾಮಕೃಷ್ಣರು ಹಲವು ವೈರುಧ್ಯಗಳ ಗುಚ್ಛವಾಗಿದ್ದರು. ನಾಟಕೀಯತೆ , ಪ್ರದರ್ಶಕತೆ ತುಂಬಿದ್ದ , ಆಟವಾಡುವ ಮನೋಭಾವದ ವರ್ಣರಂಜಿತ ಸಂತರಾಗಿದ್ದ ಅವರಿಗೆ  ಒಳ್ಳೆಯ ಊಟ , ಹಾಡು , ಭಜನೆ , ಮತ್ತು ಕುಣಿತಗಳಿಂದ ಆನಂದ ಹೊಂದಿ ಕಾಲ ಕಳೆಯುವುದು ಪ್ರಿಯವಾಗಿದ್ದಿತು. ವಿರಕ್ತಿಯನ್ನು ಬೋಧಿಸುತ್ತಲೇ ಲೌಕಿಕ ಸುಖಗಳಿಗೆ ಮೈಯೊಡ್ಡಿಕೊಂಡಿದ್ದರು. ಅವರ ಉನ್ಮತ್ತ ಜೀವನ ಒಗಟಿನಂತೆ ಇದ್ದಿತಾದರೂ ಉಲ್ಲಾಸಕ್ಕೆಂದೂ ಕೊರತೆಯಿರಲಿಲ್ಲ. ನಿರ್ವಿಕಲ್ಪ ಸಮಾಧಿ ಅವರಿಗೆ ನೆರಮನೆಯಷ್ಟೇ ಸನಿಹದಲ್ಲಿ ಇದ್ದಿತಾದರೂ ಕೈಮುರಿದಾಗ , ಕ್ಯಾನ್ಸರ್ ಬಂದಾಗ ಸಾಮಾನ್ಯನಿಗಿಂತಲೂ ಹೆಚ್ಚು ಚಿಂತಿತರಾಗಿದ್ದರು. ಮಧುರಭಾವದಲ್ಲಿ ಹೆಣ್ಣಿನಂತೆ ವರ್ತಿಸುತ್ತಿದ್ದ ರಾಮಕೃಷ್ಣರಿಗೆ ನಿಜವಾದ ಹೆಣ್ಣು ದೂರ ಇರಿಸಿ ಎಚ್ಚರ ವಹಿಸಬೇಕಾದ ಕಾಮಿನಿಯಾಗಿದ್ದಳು. ಇತರರು ಹಾಡಿದಾಗ ತಾನೂ ಹಾಡಿ ಕಣ್ಣೀರು ಸುರಿಸುವ , ಜನ ಸೇರಿದಾಗ ಎಲ್ಲರೂ ತನ್ನತ್ತ ನೋಡುವಂತೆ ಭಾವಾವೇಶದಲ್ಲಿ ಕುಣಿಯುವ , ಜನ ಬೆರಗಾಗುವಂತೆ ಬೇಕಾದಾಗ ಸಮಾಧಿಗೆ ಹೋಗುವ , ತನಗೆ ಬೇಕಾದಾಗ ಬೇಕಾದಂತಹ ದರ್ಶನಗಳನ್ನು ಕಾಣಬಲ್ಲ , ಕಾಳಿಯ ದೇವಾಲಯಕ್ಕೆ ಬರುತ್ತಿದ್ದ ಸಾಧು-ಸಂತರಿಂದ ಕೇಳಿದ್ದ , ತಾನೇ ಓದಿ ತಿಳಿದಿದ್ದ ಪುರಾಣ, ಪುಣ್ಯ ಕಥೆಗಳನ್ನು, ಅಧ್ಯಾತ್ಮವನ್ನು ಮೆಲುದನಿಯಲ್ಲಿ ಆಕರ್ಷಕ ದೃಷ್ಟಾಂತಗಳ ಮೂಲಕ ಭಕ್ತರಿಗೆ ಹಂಚುತ್ತಿದ್ದ ರಾಮಕೃಷ್ಣರು ಆ ಕಾಲದಂತೆ ಈ ಕಾಲದಲ್ಲೂ ಅಧ್ಯಾತ್ಮ ಸಾಧಕನಾಗಿ , ಯುಗಾವತಾರನಾಗಿ , ಯುಗಾಚಾರ್ಯನಾಗಿ ಉಳಿದಿದ್ದಾರೆ. ಅಂತಹವರ ಜೀವನವನ್ನು ವಾಸ್ತವ , ವಿಮರ್ಶಕ ದೃಷ್ಟಿಯಲ್ಲಿ ನೋಡುವುದೇ ಈ ಪುಸ್ತಕದ ಉದ್ದೇಶ.  

ಅಕ್ಕ ಮಹಾದೇವಿಯಂತೆ ದಿಟ್ಟೆಯಲ್ಲದ , ವಿರಕ್ತೆಯಲ್ಲದ , ಮೀರಾಬಾಯಿಯಂತೆ  ಸಂತಳಲ್ಲದ ಉಪನಿಷತ್ತಿನ ಗಾರ್ಗಿಯಂತೆ ತತ್ತ್ವಚಿಂತಕಳಲ್ಲದ , ಆಯ್ದಕ್ಕಿ ಲಕ್ಕಮ್ಮನಂತೆ ಗಂಡನಿಗೆ ಸರಿಸಮಾನವಾಗಿ ನಿಲ್ಲದ ಸಾವಿತ್ರಿಬಾಯಿ ಫುಲೆಯಂತೆ ಸಮಾಜ ಸುಧಾರಕಳಲ್ಲದ , ನೈಜ ದೃಷ್ಟಿಯಲ್ಲಿ ಬ್ರಹ್ಮಚಾರಿಣಿಯಲ್ಲದ , ದೀಕ್ಷೆ ಪಡೆದು ಸಾಧನೆ ಮಾಡಿ ಯೋಗಿನಿಯಾಗದ , ಧರ್ಮಬೋಧಕಳಾಗದ , ಮದುವೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಾರಂಪರಿಕ ಗೃಹಿಣಿಯ  ಸ್ತ್ರೀಧರ್ಮ ಅಥವಾ ಸ್ವಂತ ನಿರ್ಧಾರದಿಂದ ಬಂದಿದ್ದ ಸ್ವಧರ್ಮ ಇವೆರಡರಲ್ಲಿ ಯಾವುದನ್ನೂ ಖಚಿತವಾಗಿ ಆರಿಸಿಕೊಳ್ಳದ ಶಾರದಾಮಣಿಯ ಸುತ್ತ  ರಾಮಕೃಷ್ಣರ ಶಿಷ್ಯರು,  ರಾಮಕೃಷ್ಣ ಮಠ ಮತ್ತು ಮಿಷನ್ ಸಡಿಲ ತಳಪಾಯದ ಮೇಲೆ ಕಟ್ಟಿರುವ ಜಗಮಗಿಸುವ ಭವ್ಯಸೌಧವನ್ನು ಕೆಡವಿದರೆ ಒಳಗೆ ಮಕ್ಕಳೊದ್ದರೆ ಅಂಗಾಗ ಪುಳಕಗೊಳ್ಳುವ , ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ ಹೆಣಗಾಡುವ ಅವ್ವಕಾಣಿಸುತ್ತಾಳೆ. ಈ ಅವ್ವಶಾರದಾಮಣಿ ಯುಗಾವತಾರ-ಯುಗಾಚಾರ್ಯರಾಮಕೃಷ್ಣರಿಗಿಂತ ಹೆಚ್ಚು ಸನಿಹಳು , ಸಹಜಳು. ಇಂತಹ ಅವ್ವನ ಜೀವನ ಚರಿತ್ರೆ ಒಳಪುಟಗಳಲ್ಲಿದೆ.

Similar Books:

eBookmela
Logo