ಹಳಗನ್ನಡ-ಸಂಗಂ ತಮಿೞ್ ಮತ್ತು ಸಂಗಂ ಕಾಲದ ತೀರ್ಮಾನ HALEGGANNADA-SANGAM TAMIL MATTU SANGAM KALADA TEERMANA
About this Book
ದಕ್ಷಿಣ ಭಾರತದಲ್ಲಿ ಸಾ.ಶ 4ನೇ ಶತಮಾನದಿಂದ ಸ್ಪಷ್ಟವಾಗಿ ಭಾಷೆ, ಸಾಹಿತ್ಯ, ಬರವಣಿಗೆ, ರಾಜಕೀಯ ಕುರಿತಾದ ಚಾರಿತ್ರಿಕ ಮಾಹಿತಿ ಕಲ್ಬರಹಗಳ ಮೂಲಕ ಸಿಗುತ್ತವೆ. ಇದಕ್ಕೂ ಹಿಂದಿನ ಕಾಲಕ್ಕೆ ಸರಿದಂತೆ ದಕ್ಕುವ ಮಾಹಿತಿ ವಿರಳ, ಅಸ್ಪಷ್ಟ ಹಾಗೂ ಚರ್ಚಾಸ್ಪದವಾಗಿದೆ. ಇಂತಹ ಕೊರತೆಯನ್ನು ತಮಿೞಿನ ಕೊರಳು ಸಂಪ್ರದಾಯಕ್ಕೆ ಸೇರಿದ ‘ಸಂಗಂ ಸಾಹಿತ್ಯ’ ಎಂದು ಗುರುತಿಸಲಾಗಿರುವ ಆಕರ ತುಂಬುತ್ತದೆ ಎಂದು ನಂಬಲಾಗಿದೆ. ಕುತೂಹಲದ ಸಂಗತಿಯೆಂದರೆ ಸಂಗಂ ಸಾಹಿತ್ಯ ಮಾತ್ರವಲ್ಲದೆ ತಮಿೞಿನ ಮೊದಲ ಲಕ್ಷಣ ಗ್ರಂಥ ತೊಲ್ ಕಾಪ್ಪಿಯಂ , ತಿರುಕ್ಕುರುಳ್ ಹಾಗೂ ನಂತರ ಕಾಲದ ಭಕ್ತಿ ಸಾಹಿತ್ಯ ಕುರಿತಾಗಿ ಹಲವಾರು ಐತಿಹ್ಯಗಳು , ಕಟ್ಟು ಕಥೆಗಳು ತಮಿೞು ಸಾಹಿತ್ಯದ ಮೂಲಕ ದಕ್ಕುತ್ತವೆ. ಇವು ಯಾವುಗಳಿಗೂ ಹೊರಗಿನ ಪೂರಕ ಸಾಕ್ಷ್ಯಾಧಾರಗಳಿಲ್ಲ. ಈ ಐತಿಹ್ಯಗಳನ್ನು ಸೀಳಿ ನೋಡಿದರೆ ನಂತರ ಕಾಲದಲ್ಲಿ ತಮಿೞಿಗೆ ಪ್ರಾಚೀನತೆಯ ಹೆಮ್ಮೆಯನ್ನು ತುಂಬಲು ಇವುಗಳನ್ನು ಹೆಣೆದಿರುವಂತೆ ಭಾಸವಾಗುತ್ತದೆ. ಈ ಕಟ್ಟುಕಥೆಗಳ ಬುಡವನ್ನು ಹುಡುಕುತ್ತ , ಒಳಗಿನ ಮತ್ತು ಹೊರಗಿನ ಎಲ್ಲ ಪುರಾವೆಗಳನ್ನು ಒಟ್ಟುಗೂಡಿಸಿ ತಮಿೞಗಂ ಇತಿಹಾಸದಲ್ಲಿ ಕೃತಕವಾಗಿ ಸೇರಿಸಿರುವ 5 ಶತಮಾನಗಳ ಪ್ರಾಚೀನ ದೀರ್ಘಾವಧಿಯನ್ನು ತೆಗೆದರೆ ಅದರ ಚರಿತ್ರೆ ಕನ್ನಡಕ್ಕಿಂತ ಬೇರೆಯಾಗಿಲ್ಲ , ತಮಿೞು ಬ್ರಾಹ್ಮಿ ಕಲ್ಬರಹಗಳ ಕಾಲಾವಧಿ ಈಗ ಭಾವಿಸಿರುವಂತೆ 6 ಶತಮಾನಗಳ ಸುದೀರ್ಘ ಕಾಲಾವಧಿಗೆ ಹೊಂದುವುದಿಲ್ಲ ಹಾಗೂ , ತೊಲ್ ಕಾಪ್ಪಿಯಂ ತಿಳಿಸುವ ಲಿಪಿ ಪದ್ದತಿ ಸಾ.ಶ 7ನೇ ಶತಮಾನಕ್ಕೆ ಮೊದಲು ಇರಲಿಲ್ಲವಾದ್ದರಿಂದ ಅದರ ಕಾಲ ಆ ನಂತರದ್ದು , ಸಾ.ಶ 8-10 ಶತಮಾನಗಳ ಅವಧಿಯಲ್ಲಿ ತಮಿಳಗಂನಲ್ಲಿದ್ದ ಚೋಳ, ಚೇರ, ಪಾಂಡ್ಯರು ಆಸ್ಥಾನ ಕವಿಗಳ ಮೂಲಕ ಹಿಂದಿನ ಕೆಲ ಐತಿಹಾಸಿಕ ಸಂಗತಿಗಳ ಎಳೆಗಳನ್ನು ಹಿಡಿದು ಸಂಗಂ ಹಾಡುಗಳನ್ನು ಕಟ್ಟಿದರೆಂದು ಒಳಗಿನ ಹಾಗೂ ಹೊರಗಿನ ಪುರಾವೆಗಳ ಮೂಲಕ ತೋರಿಸಬಹುದು. ಇದಕ್ಕಾಗಿ ಹಳಗನ್ನಡ ಮತ್ತು ಸಂಗಂ ತಮಿಳಿನ ಹೋಲಿಕೆಯಂತಹ ಭಾಷಾ ವೈಜ್ಞಾನಿಕ ತಳಹದಿ , ಪಾಣಾರ-ಮೂವೇಂದರರ ನಿರುಗೆಗಳ ಬಳಕೆ ಮುಂತಾದ ಹೊಸ ಬಗೆಯ ವಿಶ್ಲೇಣೆಯ ಸಲಕರಣೆಗಳನ್ನು ಬಳಸಿ ಸಂಗಂ ಕಾಲವನ್ನು ಈ ಕೃತಿಯಲ್ಲಿ ತೀರ್ಮಾನ ಮಾಡಲಾಗಿದೆ.
Source: View Book on Google Books